ಸುಖಾಂತ್ಯ ಕಂಡ ಮೂಡಲಗಿ ತಾಲೂಕಿನ ಶಿವಾಪೂರ(ಹ) ಗ್ರಾಮದ ಅಡವಿ ಸಿದ್ದೇಶ್ವರ ಮಠದ ಅಡವಿ ಸಿದ್ದರಾಮ ಸ್ವಾಮೀಜಿಯವರ ಪ್ರಕರಣ.

GKK BLJ

ಗೋಕಾಕ : ಮೂಡಲಗಿ ತಾಲೂಕಿನ ಶಿವಾಪೂರ(ಹ) ಗ್ರಾಮದ ಅಡವಿ ಸಿದ್ದೇಶ್ವರ ಮಠದ ಅಡವಿ ಸಿದ್ದರಾಮ ಸ್ವಾಮೀಜಿಯವರ ನಡೆಯ ಕುರಿತು ಭಕ್ತರಲ್ಲಿ ಉಂಟಾಗಿದ್ದ ಗೊಂದಲವು ಸುಖಾಂತ್ಯ ಕಂಡಿದೆ.

ನಗರದ ಶೂನ್ಯ ಸಂಪಾದನ ಮಠದಲ್ಲಿ ಗುರುವಾರ ಸಂಜೆ ನಾನಾ ಶ್ರೀಗಳೊಂದಿಗೆ ಕ್ಷೇತ್ರದ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಶಿವಾಪೂರ (ಹ) ದ ಅಡವಿ ಸಿದ್ದೇಶ್ವರ ಶ್ರೀಗಳ ತಪ್ಪು ಕಾಣದಿರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಮಠದಲ್ಲಿಯೇ ಮುಂದುವರಿಯಲು ಅಡವಿಸಿದ್ದರಾಮ ಸ್ವಾಮೀಜಿಗೆ ಅವಕಾಶ ಕಲ್ಪಿಸುವ ಮೂಲಕ ಭಕ್ತರಲ್ಲಿ ಮೂಡಿದ್ದ ಗೊಂದಲವನ್ನು ಸಂಪೂರ್ಣವಾಗಿ ನಿವಾರಣೆಯಾಗಿದೆ.

ಸಭೆಯ ನಂತರ ಶಾಸಕ ಮತ್ತು ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಮಾತನಾಡಿ, ಈಗಾಗಲೇ ತಮಗೆ ಗೊತ್ತಿದ್ದಂತೆ ಶಿವಾಪುರ (ಹ) ಗ್ರಾಮದಲ್ಲಿರುವ ಅಡವಿ ಸಿದ್ದೇಶ್ವರ ಮಠದ ಶ್ರೀಗಳ ವಿರುದ್ಧವಾಗಿ ಬಂದಿರುವ ಆಪಾದನೆ ಮಾಧ್ಯಮಗಳು ಮತ್ತು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚಿತವಾಗಿತ್ತು. ಹೀಗಾಗಿ ಶ್ರೀಗಳ ಕುರಿತಾಗಿ ಬಂದಿರುವ ಆಪಾದನೆಗಳ ಬಗ್ಗೆ ಆಂತರಿಕ ತನಿಖೆ ನಡೆಸಿ ವರದಿ ನೀಡುವಂತೆ ನಾವೆಲ್ಲ ಪೊಲೀಸ್ ಅಧಿಕಾರಿಗಳಲ್ಲಿ ತಿಳಿಸಿದ್ದೆವು. ಅದರಂತೆ ಇಂಟಲಿಜೆನ್ಸಿ ಮತ್ತು ಪೊಲೀಸ್ ಅಧಿಕಾರಿಗಳ ತನಿಖಾ ವರದಿ ಆಧಾರದ ಮೇಲೆ ಸಭೆಯಲ್ಲಿ ಚರ್ಚೆ ಮಾಡಿದ್ದೇವೆ. ಈ ವರದಿಯಲ್ಲಿ ಅಡವಿ ಸಿದ್ದರಾಮ ಸ್ವಾಮಿಗಳ ಕುರಿತು ಬಂದಿರುವ ಆಪಾದನೆ ಸುಳ್ಳು ಎಂದು ತಿಳಿದುಬಂದಿದೆ ಎಂದು ಹೇಳಿದರು.

ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣದಲ್ಲಿ ಬರುತ್ತಿರುವ ಆಪಾದನೆಗಳ ಬಗ್ಗೆ ಶ್ರೀಗಳು ಕೂಡ ಬಹಳ ಬೇಸರಗೊಂಡಿದ್ದರು. ಶಿವಾಪುರದ ಶ್ರೀಗಳ ವಿರುದ್ಧ ಬಂದಿರುವ ಆರೋಪಗಳು ಸುಳ್ಳು ಎಂದು ನಾವು ಪೊಲೀಸರಿಗೆ ತಿಳಿಸಿದ್ದೇವೆ. ಜೊತೆಗೆ ಘಟನೆಯ ವೇಳೆ ಯಾರು ಬಂದು ಗಲಾಟೆ ಮಾಡಿದ್ದಾರೋ? ಅಂತಹ ತಪ್ಪಿತಸ್ಥರ ವಿರುದ್ಧವೂ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸೂಚನೆ ಕೊಟ್ಟಿದ್ದೇವೆ ಎಂದರು.

ಪೂಜ್ಯರ ವಿರುದ್ಧ ಬಂದಿರುವ ಆಪಾದನೆ ಸುಳ್ಳು ಎಂದು ಈ ಮೂಲಕ ಸ್ಪಷ್ಟಪಡಿಸುತ್ತಿರುವೆ. ಜೊತೆಗೆ ಶ್ರೀಗಳ ಮತ್ತು ಶಿವಾಪುರ (ಹ) ಗ್ರಾಮದ ಹಿರಿಯರು- ಗ್ರಾಮಸ್ಥರು ಎಲ್ಲರೂ ಸೇರಿ ವಿವಾದವನ್ನು ಬಗೆಹರಿಸಲು ಸಹಕಾರ ನೀಡಿದ್ದಾರೆ. ಶ್ರೀಗಳ ಜೊತೆಗೆ ಶಿವಾಪುರ ಗ್ರಾಮಕ್ಕೆ ಇದರಿಂದ ಕೆಟ್ಟ ಹೆಸರು ಬರುತ್ತದೆ. ಹೀಗಾಗಿ ಘಟನೆಯನ್ನು ಇಲ್ಲಿಗೆ ಅಂತ್ಯಗೊಳಿಸಲು ಸಭೆಯಲ್ಲಿ ಒಮ್ಮತದ ನಿರ್ಣಯ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ವಿವಾದ ಅಂತ್ಯವಾಗಿದ್ದರಿಂದ ಶ್ರೀಗಳು ಮತ್ತೆ ಮಠಕ್ಕೆ ತೆರಳಿ ಅಲ್ಲಿಯೇ ತಮ್ಮ ಕಾಯಕ ಪೂಜೆ ನಿಷ್ಠೆಯನ್ನು ಮತ್ತೆ ಮುಂದುವರಿಸಲಿದ್ದಾರೆ. ಅದರಂತೆ ಶಿವಾಪುರ (ಹ) ಗ್ರಾಮದ ಎಲ್ಲ ಜನರು ಸೌಹಾರ್ದತೆಯಿಂದ ಈ ವಿವಾದವನ್ನು ಇಲ್ಲಿಗೆ ಅಂತ್ಯಗೊಳಿಸುವ ಮೂಲಕ ಶ್ರೀಗಳಿಗೆ ಮೊದಲಿನಂತೆ ತಮ್ಮ ಸಹಕಾರವನ್ನು ನೀಡಲಿದ್ದಾರೆ. ಅದಕ್ಕಾಗಿ ಅವರಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದರು.

ಶ್ರೀಗಳ ವಿರುದ್ಧ ಅಪಾದನೆ ಬಂದಾಗ ಅವರು ಅಲ್ಲಿಯೇ ಇರಲು ಇಚ್ಚಿಸಿದ್ದರು. ಆದರೆ ಕಾನೂನು ಮತ್ತು ಸುವ್ಯವಸ್ಥೆ, ಹದಗೆಡುತ್ತದೆ ಎಂಬ ಕಾರಣಕ್ಕಾಗಿ ಶ್ರೀಗಳು ಗೋಕಾಕದ ಶೂನ್ಯ ಸಂಪಾದನ ಮಠಕ್ಕೆ ತೆರಳಿದರು. ಈಗ ವಿವಾದ ಸುಖಾಂತ್ಯವಾಗಿದೆ. ಎಲ್ಲರೂ ಮೊದಲಿನಂತೆ ಸಹಕರಿಸಬೇಕು ಎಂದರು.

ಈ ಸಭೆಯಲ್ಲಿ ಗೋಕಾಕ ಶೂನ್ಯ ಸಂಪಾದನ ಮಠದ ಮುರಾಘರಾಜೇಂದ್ರ ಮಹಾಸ್ವಾಮಿಗಳು, ಅಂಕಲಗಿ ಅಡವಿ ಸಿದ್ಧೇಶ್ವರ ಮಠದ ಅಮರೇಶ್ವರ ಮಹಾಸ್ವಾಮಿಗಳು, ಹುಣಶ್ಯಾಳ ಪಿಜಿ ಕೈವಲ್ಯ ಆಶ್ರಮ ಸಿದ್ಧಲಿಂಗ ಮಹಾಸ್ವಾಮಿಗಳು, ಹಂದಿಗುಂದದ ಶಿವಾನಂದ ಮಹಾಸ್ವಾಮಿಗಳು, ರಂಗಾಪೂರದ ಮುರುಘರಾಜೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು, ಘಟಪ್ರಭಾ ಗುಬ್ಬಲಗುಡ್ಡ ಮಠದ ಮಲ್ಲಿಕಾರ್ಜುನ ಮಹಾಸ್ವಾಮಿಗಳು, ಜಡಿ ಸಿದ್ದೇಶ್ವರ ಮಠದ ಶಿವಾನಂದ ಮಹಾಸ್ವಾಮಿಗಳು, ಪ್ರಭುದೇವ ಮಠ ಚಿಮ್ಮುಡದ ಪ್ರಭು ಮಹಾಸ್ವಾಮಿಗಳು ಸೇರಿದಂತೆ ಹಲವು ಸ್ವಾಮೀಜಿಗಳು, ಮಠದ ಭಕ್ತರು ಇದೆ ವೇಳೆ ಪಾಲ್ಗೊಂಡಿದ್ದರು.

ಶಿವಾಪೂರ (ಹ) ಮುಖಂಡರಾದ ಮಲ್ಲಗೌಡ ಪಾಟೀಲ, ಕೆಂಪಣ್ಣ ಮುಧೋಳ, ಬಸವರಾಜ ಸಾಯನ್ನವರ, ಶಿವಬಸು ಜುಂಜರವಾಡ, ಮಹಾಂತೇಶ ಕುಡಚಿ, ಪರಗೌಡ ಪಾಟೀಲ, ಸತೀಶ ಜುಂಜರವಾಡ ಸೇರಿದಂತೆ ಅನೇಕ ಜನರು ಉಪಸ್ಥಿತರಿದ್ದರು.

ನನ್ನ ಮೇಲೆ ಬಂದಿರುವ ಆರೋಪ ಮತ್ತು ಕಳಂಕ ಎಂದು ತಿಳಿದು ಬಂದಿದ್ದು ಇದನ್ನು ತೊಳೆದು ಹಾಕಿದ್ದಕ್ಕೆ ಎಲ್ಲ ಶ್ರೀಗಳಿಗೆ ಮತ್ತು ಕ್ಷೇತ್ರದ ಶಾಸಕರಿಗೆ ಜನರಿಗೆ ನಾನು ಅನಂತ ಕೃತಜ್ಞತೆ ಅರ್ಪಿಸುವೆ.
                                                                                                                                 – ಅಡವಿಸಿದ್ದರಾಮ ಸ್ವಾಮೀಜಿ
ಅಡವಿ ಸಿದ್ದೇಶ್ವರ ಮಠ ಶಿವಾಪೂರ(ಹ)

ಒಂದು ಕೆಟ್ಟ ಘಟನೆ ಇಂಥ ಘಟನೆ ಮತ್ತೆ ಮರುಕಳಿಸದಿರಲಿ. ಯಾರೇ ತಪ್ಪು ಮಾಡಿದರು ಕ್ರಮ ಕೈಗೊಳ್ಳಲು ಕಾನೂನಿನಲ್ಲಿ ಅವಕಾಶವಿದೆ. ಹೀಗಾಗಿ ಯಾರು ಕಾನೂನನ್ನು ಕೈಗೆ ಎತ್ತಿಕೊಳ್ಳುವ ಕಾರ್ಯಕ್ಕೆ ಮುಂದಾಗಬಾರದು ಪೂಜ್ಯರ ವಿರುದ್ಧ ಬಂದಿರುವ ಕಳಂಕ ಸುಳೆಂದು ತಿಳಿದು ಬಂದ ಹಿನ್ನೆಲೆಯಲ್ಲಿ ವಿವಾದವನ್ನು ಇಲ್ಲಿಗೆ ಅಂತ್ಯಗೊಳಿಸಬೇಕು.

                                                                                                                     – ಶಿವಾನಂದ ಮಹಾಸ್ವಾಮಿಗಳು,  ಹಂದಿಗುಂದ

Leave a Comment

Your email address will not be published. Required fields are marked *

Scroll to Top